ಯುನಿಕೋಡ್ ಎಂದರೇನು?
ಪ್ಲಾಟ್‌ಫಾರ್ಮ್ ಯಾವುದಾದರೂ ಪರವಾಗಿಲ್ಲ,
ಕ್ರಮವಿಧಿ ಯಾವುದಾದರೂ ಪರವಾಗಿಲ್ಲ,
ಭಾಷೆ ಯಾವುದಾದರೂ ಪರವಾಗಿಲ್ಲ,
ಯುನಿಕೋಡ್ ಪ್ರತಿಯೊಂದು ಅಕ್ಷರಕ್ಕೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುತ್ತದೆ.
ಗಣಕಗಳು ಮೂಲತಃ ಅಂಕಿಗಳೊಡನೆ ಮಾತ್ರ ವ್ಯವಹರಿಸುತ್ತವೆ. ಗಣಕಗಳಲ್ಲಿ ಅಕ್ಷರಗಳು ಹಾಗೂ ಇನ್ನಿತರ ಸಂಕೇತಗಳನ್ನು ಶೇಖರಿಸಿಡುವಾಗ ಅವುಗಳಿಗೆ ತಲಾ ಒಂದೊಂದು ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ. ಯುನಿಕೋಡ್ ಬಳಕೆಗೆ ಬರುವ ಮುನ್ನ ಹೀಗೆ ಸಂಖ್ಯೆಗಳನ್ನು ನಿಗದಿಪಡಿಸುವ ನೂರಾರು ಎನ್‌ಕೋಡಿಂಗ್ ವ್ಯವಸ್ಥೆಗಳು ಉಪಯೋಗದಲ್ಲಿದ್ದವು. ಆದರೆ ಇಂತಹ ಯಾವ ವ್ಯವಸ್ಥೆಯೂ ಬಳಕೆಯಲ್ಲಿರುವ ಎಲ್ಲ ಅಕ್ಷರಗಳನ್ನೂ ಪ್ರತಿನಿಧಿಸುವಷ್ಟು ಶಕ್ತವಾಗಿರಲಿಲ್ಲ: ಉದಾಹರಣೆಗೆ ಯುರೋಪಿಯನ್ ಒಕ್ಕೂಟದಲ್ಲಿ ಬಳಕೆಯಲ್ಲಿರುವ ಭಾಷೆಗಳನ್ನಷ್ಟೆ ಪ್ರತಿನಿಧಿಸಲು ಅನೇಕ ಎನ್‌ಕೋಡಿಂಗ್ ವ್ಯವಸ್ಥೆಗಳು ಬೇಕಾಗುತ್ತವೆ. ಅಷ್ಟೇ ಏಕೆ, ಇಂಗ್ಲಿಷ್ ಭಾಷೆಯಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಎಲ್ಲ ಅಕ್ಷರಗಳು, ಲೇಖನ ಚಿಹ್ನೆಗಳು ಹಾಗೂ ತಾಂತ್ರಿಕ ಸಂಕೇತಗಳನ್ನು ಪ್ರತಿನಿಧಿಸಲು ಕೂಡ ಯಾವ ಎನ್‌ಕೋಡಿಂಗ್ ವ್ಯವಸ್ಥೆಯೂ ಪರಿಣಾಮಕಾರಿಯಾಗಿರಲಿಲ್ಲ.
ಈ ಎನ್‌ಕೋಡಿಂಗ್ ವ್ಯವಸ್ಥೆಗಳ ನಡುವೆ ಪರಸ್ಪರ ಹೊಂದಾಣಿಕೆಯೂ ಇರುವುದಿಲ್ಲ. ಅಂದರೆ, ಎರಡು ವಿಭಿನ್ನ ಎನ್‌ಕೋಡಿಂಗ್ ವ್ಯವಸ್ಥೆಗಳು ಒಂದೇ ಅಕ್ಷರವನ್ನು ಪ್ರತಿನಿಧಿಸಲು ಬೇರೆಬೇರೆ ಸಂಖ್ಯೆಗಳನ್ನು ಉಪಯೋಗಿಸುವುದು ಅಥವಾ ಬೇರೆಬೇರೆ ಅಕ್ಷರಗಳನ್ನು ಪ್ರತಿನಿಧಿಸಲು ಒಂದೇ ಸಂಖ್ಯೆಯನ್ನು ಬಳಸುವುದು ಸಾಮಾನ್ಯ. ಗಣಕಗಳು (ಅದರಲ್ಲೂ ವಿಶೇಷವಾಗಿ ಸರ್ವರ್‌ಗಳು) ವಿಭಿನ್ನ ಎನ್‌ಕೋಡಿಂಗ್ ವ್ಯವಸ್ಥೆಗಳ ಬಳಕೆಗೆ ಅನುವುಮಾಡಿಕೊಡಬೇಕಾಗುತ್ತದೆ; ಆದರೆ ಅವುಗಳ ನಡುವಿನ ವೈರುದ್ಧ್ಯದಿಂದಾಗಿ ಒಂದು ವ್ಯವಸ್ಥೆಯಲ್ಲಿ ದಾಖಲಾಗಿರುವ ಪಠ್ಯ ಇನ್ನೊಂದು ವ್ಯವಸ್ಥೆಗೆ ಅಥವಾ ಪ್ಲಾಟ್‌ಫಾರ್ಮ್‌ಗೆ ಬದಲಾಗುವಾಗ ತಪ್ಪುಗಳಾಗುವ ಸಾಧ್ಯತೆ ಸದಾ ಇರುತ್ತದೆ.
ಯುನಿಕೋಡ್ ಅದನ್ನೆಲ್ಲ ಬದಲಿಸುತ್ತಿದೆ!
ಪ್ಲಾಟ್‌ಫಾರ್ಮ್ ಯಾವುದಾದರೂ ಪರವಾಗಿಲ್ಲ, ಕ್ರಮವಿಧಿ ಯಾವುದಾದರೂ ಪರವಾಗಿಲ್ಲ, ಭಾಷೆ ಯಾವುದಾದರೂ ಪರವಾಗಿಲ್ಲ, ಯುನಿಕೋಡ್ ಪ್ರತಿಯೊಂದು ಅಕ್ಷರಕ್ಕೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುತ್ತದೆ. ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಆಪಲ್, ಹೆಚ್‌ಪಿ, ಐಬಿಎಂ, ಜಸ್ಟ್‌ಸಿಸ್ಟಮ್ಸ್, ಮೈಕ್ರೋಸಾಫ್ಟ್, ಅರೇಕಲ್, ಎಸ್‌ಎಪಿ, ಸನ್, ಸೈಬೇಸ್, ಯುನಿಸಿಸ್ ಮತ್ತು ಇನ್ನೂ ಹಲವಾರು ಸಂಸ್ಥೆಗಳು ಯುನಿಕೋಡ್ ಮಾನಕವನ್ನು ಒಪ್ಪಿ ಅಳವಡಿಸಿಕೊಂಡಿವೆ. ಎಕ್ಸ್‌ಎಂಎಲ್, ಜಾವಾ, ಇಸಿಎಂಎಸ್ಕ್ರಿಪ್ಟ್ (ಜಾವಾಸ್ಕ್ರಿಪ್ಟ್), ಎಲ್‍ಡಿಎಪಿ, ಕೋರ್ಬಾ ೩.೦, ಡಬ್ಲ್ಯೂಎಂಎಲ್ ಮುಂತಾದ ಹಲವಾರು ಆಧುನಿಕ ಮಾನಕಗಳಿಗೆ ಅಗತ್ಯವಾದ ಯುನಿಕೋಡ್, ಐಎಸ್‌ಒ/ಐಇಸಿ ೧೦೬೪೬ ಅನ್ನು ಅಳವಡಿಸುವ ಅಧಿಕೃತ ಮಾರ್ಗವೂ ಆಗಿದೆ. ಹಲವಾರು ಕಾರ್ಯಾಚರಣ ವ್ಯವಸ್ಥೆಗಳು, ಎಲ್ಲ ಆಧುನಿಕ ಬ್ರೌಸರ್‌ಗಳು ಹಾಗೂ ಇನ್ನೂ ಅನೇಕ ಉತ್ಪನ್ನಗಳು ಯುನಿಕೋಡ್ ಬಳಕೆಯನ್ನು ಬೆಂಬಲಿಸುತ್ತವೆ. ಯುನಿಕೋಡ್ ಮಾನಕದ ಉಗಮ ಹಾಗೂ ಅದನ್ನು ಬೆಂಬಲಿಸುವ ತಂತ್ರಾಂಶ ಸಲಕರಣೆಗಳ ಲಭ್ಯತೆ, ಜಾಗತಿಕ ತಂತ್ರಾಂಶ ತಂತ್ರಜ್ಞಾನ ಕ್ಷೇತ್ರದ ಹೊಸ ಒಲವುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ಹಳೆಯ ವಿಧಾನಗಳಿಗೆ ಹೋಲಿಸಿದಾಗ, ಕ್ಲೈಂಟ್ - ಸರ್ವರ್ ಅಥವಾ ಬಹುಶ್ರೇಣಿಯ ಆನ್ವಯಿಕ ತಂತ್ರಾಂಶಗಳು ಹಾಗೂ ಜಾಲತಾಣಗಳಲ್ಲಿ ಯುನಿಕೋಡ್ ಬಳಸುವುದರಿಂದ ವೆಚ್ಚದಲ್ಲಿ ಗಮನಾರ್ಹ ಪ್ರಮಾಣದ ಉಳಿತಾಯವನ್ನು ಸಾಧಿಸಬಹುದು. ವಿನ್ಯಾಸದಲ್ಲಿ ಬದಲಾವಣೆಯಿಲ್ಲದೆ ಯಾವುದೇ ತಂತ್ರಾಂಶ ಉತ್ಪನ್ನ ಅಥವಾ ಜಾಲತಾಣವನ್ನು ಹಲವಾರು ಪ್ಲಾಟ್‌ಫಾರ್ಮ್‌ಗಳು, ಭಾಷೆಗಳು ಹಾಗೂ ದೇಶಗಳಲ್ಲಿ ಬಳಸಲು ಯುನಿಕೋಡ್ ಅನುವುಮಾಡಿಕೊಡುತ್ತದೆ. ಹಲವಾರು ವಿಭಿನ್ನ ವ್ಯವಸ್ಥೆಗಳ ನಡುವೆ ತಪ್ಪುಗಳಿಗೆ ಅವಕಾಶವಿಲ್ಲದಂತೆ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಲು ಅದು ಅನುವುಮಾಡಿಕೊಡುತ್ತದೆ.
ಯುನಿಕೋಡ್ ಕನ್ಸಾರ್ಷಿಯಂ ಬಗ್ಗೆ
ಆಧುನಿಕ ತಂತ್ರಾಂಶ ಉತ್ಪನ್ನಗಳು ಹಾಗೂ ಮಾನಕಗಳಲ್ಲಿ ಪಠ್ಯದ ಪ್ರತಿನಿಧಿತ್ವವನ್ನು ನಿರೂಪಿಸುವ ಯುನಿಕೋಡ್ ಮಾನಕದ ಅಭಿವೃದ್ಧಿ, ವಿಸ್ತರಣೆ ಹಾಗೂ ಬಳಕೆಯನ್ನು ಪ್ರೋತ್ಸಾಹಿಸುವುದು ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾದ ಯುನಿಕೋಡ್ ಕನ್ಸಾರ್ಷಿಯಂನ ಉದ್ದೇಶ. ಗಣಕ ಹಾಗು ಮಾಹಿತಿ ಸಂಸ್ಕರಣಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ಅಪಾರ ಸಂಖ್ಯೆಯ ನಿಗಮಗಳು ಹಾಗೂ ಸಂಸ್ಥೆಗಳು ಈ ಕನ್ಸಾರ್ಷಿಯಂನ ಸದಸ್ಯತ್ವ ಪಡೆದುಕೊಂಡಿವೆ. ಸದಸ್ಯತ್ವ ಶುಲ್ಕದಿಂದ ಬರುವ ಆದಾಯವಷ್ಟರಿಂದಲೇ ಈ ಕನ್ಸಾರ್ಷಿಯಂಗೆ ಆರ್ಥಿಕ ನೆರವು ಒದಗುತ್ತಿದೆ. ಯುನಿಕೋಡ್ ಮಾನಕವನ್ನು ಬೆಂಬಲಿಸುವ ಹಾಗೂ ಅದರ ವಿಸ್ತರಣೆ ಮತ್ತು ಅಳವಡಿಸುವಿಕೆಯಲ್ಲಿ ನೆರವುನೀಡಲು ಇಚ್ಛಿಸುವ ಪ್ರಪಂಚದ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಯುನಿಕೋಡ್ ಕನ್ಸಾರ್ಷಿಯಂ ಸದಸ್ಯತ್ವ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ
ಶಬ್ದ ಪರಿಭಾಷೆ,
ತಾಂತ್ರಿಕ ಪರಿಚಯ ಹಾಗೂ
ಉಪಯುಕ್ತ ಸಂಪನ್ಮೂಲಗಳನ್ನು ನೋಡಿ.
Kannada translation by T. G. Srinidhi